ಏನಾಗಿದೆ ನಮಗಿಬ್ಬರಿಗೂ.!?
-ನಂದಿನಿ ಹೆದ್ದುರ್ಗ
ನನಗೇನಾಗಿದೇ ಪ್ರಭುವೇ..?
ಈ ನಡುರಾತ್ರಿಯಲ್ಲಿ
ಅಂಗಳದಲ್ಲೊಂದು ಹಾಸು ಹಾಸಿ
ಮುಗಿಲಿಗೆ ಕಂಗಳನು ಹರಿಸಿ
ಕತ್ತಲಿನ ಉದ್ದಗಲ ಅಳೆಯುವ ವ್ಯರ್ಥ ಯತ್ನ ಯಾಕಿಷ್ಟು ಹಿತವೆನಿಸಿದೆ.?
ಮೂರು ಚುಕ್ಕಿ, ಆರು ಚುಕ್ಕಿಗಳ ಆವರಣ ನೋಡುತ್ತಾ ಸುಮ್ಮನಾದರೂ ಚುಕ್ಕಿಚುಕ್ಕಿಗಳ ಕೂಡಿಸಿ ಮಾಡು ಕಟ್ಟಿ ಮರೆತ ಚುಕ್ಕಿಗಳ ಹೆಕ್ಕಿ ಗೋಡೆಗೆ ತೂಗುಬಿಟ್ಟೆನೆಂಬ ಕಲ್ಪನೆ ಯಾಕೆ ಸೊಗಸೆನಿಸುತ್ತಿದೆ.?
ಹೊಸದಾದ ಹಸಿವೊಂದು ಒಡಲಾಳ ಹೊಕ್ಕಿ ,ಸೊಕ್ಕಿ ತಳಹೊಟ್ಟೆಯಲ್ಲಿ ಮಿಸುಗಾಡಬೇಕೆಂಬ ಆಸೆ ಹೀಗೇಕೆ ಹಗಲಿರುಳು ಹಸಿಯಾಗಿದೆ.?
ನೀನಲ್ಲದೇ ನನ್ನ ಸಂದೇಹ ಮುಂದಿಡುವುದಾದರೂ ಯಾರೆದಿರು.?
ಕೇಳಿದೆ.
‘ಏನಾಗಿದೆ ನಮಗಿಬ್ಬರಿಗೂ ಹನೀ?’
ನನ್ನ ಧ್ವನಿಯಲ್ಲಿ ಅವನ ಜೀವದ ಬನಿ ಅಡಗಿದೆಯಂತೆ.
ಹಾಗೆನ್ನುತ್ತಾನೆ ಅವನು..
ನಾನು ಕೇಳಿದ್ದು ಒಂದೇ ಒಂದು ಪ್ರಶ್ನೆ…
ನಿನ್ನ ಉತ್ತರವೆಷ್ಟು ಉನ್ಮತ್ತ..!!
“ಒಂದು ಹದವಾದ ಹುಚ್ಚು ಹಿತವಾಗಿ ಆವರಿಸಿದೆ ಹುಡುಗಿ.
ಹುಸಿ ಒಳ್ಳೆಯತನ ನಟಿಸಿ ನಾನದರ ಸುಖ ಕಳೆದುಕೊಳ್ಳಲಾರೆ.
ಗೊತ್ತೇನು?
ಮಧುಬಟ್ಟಲ ಕುರಿತು ಮರೆತ ದಿನಗಳಿವು..
ಮೊರೆಯಿಟ್ಟರೆ ಪ್ರಭುವೊಬ್ಬನಿಗಾಗಿ ಎಂದುಕೊಂಡವನು ನಾನು.
ಏನಚ್ಚರಿ ನೋಡು.!!
ಯಾವ ದಿನವಂದು…!?
ಏನು ಕಾರಣ ಹೇಳು.?
ಯಾರಿದ್ದೀರಿ..?
ಎನ್ನುತ್ತಾ ಮೃದುವಾಗಿ ಕದಬಡಿದು ಅಪ್ಪಣೆಗೆ ಕಾಯದೇ ಒಳಬಂದೆ..
ಹಸೆಮಣೆಯಿಲ್ಲ,ಓಕುಳಿಯಿಲ್ಲ,ಕಣ್ಣೆಲೆ ,ಆರತಿ ಇಲ್ಲ.
ಬಲಗಾಲನಿಟ್ಟೆಯೋ ಗೊತ್ತಿಲ್ಲ.
ಬೆಲ್ಲ ಅಕ್ಕಿಯ ಬಟ್ಟಲನ್ನೆಡವಲಿಲ್ಲ.
ಹಾಲುಕ್ಕಿಸಲಿಲ್ಲ,
ಹಿರಿಯರಿಗೆ ಎರಗಿ ಹರಸಿರೆನ್ನಲಿಲ್ಲ..
ಹೌದು..
ಹೇಳದೇ..,
ಕೇಳಿದರೂ ಕಾಯದೇ
ನೀ ಬಂದೆ ಒಳಗೆ…
ನೋಡಿಗಾ..!!
ಎಲ್ಲ ಎಲ್ಲೆಗಳಿಂದ ತಲ್ಲಣಗಳ ತುಂತುರು.
ನೀನು ಸೋನೆಯಾದೆ.
ಎದೆಯೊಳಗೆ ಅಡಗಿಸಿಟ್ಟ ಭಾವ ಬಿತ್ತಗಳೆಲ್ಲಾ ಎರಡೆಲೆಗಳ ತುಳುಕಿಸಿ ಮೊಳೆತು ನಿಂತಿವೆ.!!
ಇಲ್ಲದ ಸಾಕಿಯ ಮಧುಬಟ್ಟಲ ಕುರಿತಾಗಿ ಹುಟ್ಟದ ಒಣಕವಿತೆ ಬರೆಯುತಿದ್ದವನು ನಾನು.
ನೀನು ನಸುನಕ್ಕಾಗ ತುಂಬಿದ್ದು ಈ ಹೊಸಬಿಂದಿಗೆ.
ಖಾಲಿಯಾಗುವುದೇ ಇಲ್ಲವೆನ್ನುತ್ತಿದೆ ಈಗ.

ಬೆಳಕ ಹೀಗೆ ತೊಟ್ಟಿಕ್ಕಿಸುವ ಕಲೆ ಒಲಿದದ್ದಾದರೂ ಹೇಗೆ ನಿನಗೆ ಹುಡುಗಿ.?
ಹಾದಿಗುಂಟ ಹೊದರು ಪೊದರುಗಳನ್ನೆ ಹಾದು ಬಂದ ಬಾನ ಹೂವು ನೀನು.
ಬಾಳ ಪಯಣದಲಿ ನಾಳೆಗಳು ಹೊಳೆಯುವವು ಎಂಬ ನಂಬುಗೆಯ ಗಂಡು ನಾನು..
ಯಾಕೆ ನವಿಲಾದೆ ಹೀಗೆ.?
ಹೀಗೇ ನನ್ನ ನೆಲವಾಗಿಸಿ ನಿನ್ನೊಲವ ಕೊಕ್ಕಿನಲಿ ಕಚ್ಚಿ ಎತ್ತೆಂದರತ್ತ ಹೊತ್ತೊಯ್ಯುವುದೆಷ್ಟು ಸರಿ ಹೆಣ್ಣೇ.?
ನೀ ಕುಕ್ಕಿದ ಜಾಗದಲಿ ನೆತ್ತರು ಒಸರಿದಷ್ಟೂ ಹಿತವಾದ ನೋವು.. ಗೊತ್ತೇನು ನಿನಗೆ?
ನಮ್ಮಿಬ್ಬರ ಒಲವ ಕುರುಹಾಗಿ ಒಂದು ಅಳಿಯದ ಕಲೆಯ ಬಯಸಿದವನು ನಾನು.!
ನೋಡಿಗಾ…
ಕತ್ತಿನ ಹೊರತುದಿಗೆ ಹಚ್ಚೆ ಹಾಕಿಬಿಟ್ಟಿದ್ದಿ.!!
ಜಗತ್ತು
ಎದುರಿಗೆ ಏನೂ ಆಡುವುದಿಲ್ಲ..
ಹಿಂದೆ ಬಂದವರು,ಹಾದು ಹೋದವರು,ಹೊರಳಿ ನೋಡಿದವರು ಬೆಚ್ಚಿ ಬೀಳುತ್ತಾರೆ..
ಹಚ್ಚೆಯ ಈ ಆಕಾರಕ್ಕೇನರ್ಥ ಎನ್ನುತ್ತಾರೆ..
ನಕ್ಕು ಸುಮ್ಮನಾಗುತ್ತೇನೆ..
ಅಕಾಲ ಯೌವನ ನಮ್ಮಿಬ್ಬರಿಗೂ..
ವಾನಪ್ರಸ್ಥದ ವೇಳೆಯಲ್ಲಿ ಸಪ್ತಪದಿ ಯೋಚನೆ.
ಹಾರ ಬದಲಾಗುವ ಸೂಚನೆ..!!
ತೃಣದ ಚಲನೆಗೂ ಅನುಮತಿ ಬೇಕು ಎಂಬ ಸಿದ್ದಾಂತ ನನ್ನದು..
ಅವರಿವರಿಗೆ ಉತ್ತರ ಕೊಡುವ ಹೊರತು
ನನ್ನ ಸಲುವಾಗಿ ನೀನುಕ್ಕುವುದನ್ನೂ
ನಿನ್ನ ಸಲುವಾಗಿ ನಾ ಮೊರೆಯುವುದನ್ನೂ ಅನುಭವಿಸುತ್ತೇನೆ..
ವಿಧಿಯೇ ವಿವರಣೆ ನೀಡಲಿ ಬೇಕಿದ್ದರೆ..
ಏನೆಂದೆ ಮೊನ್ನೆ ನೀನು..
‘ಬಟ್ಟೆಗಳ ಕಳಚಿ,ಚರ್ಮದ ಹೊದಿಕೆ ಬಿಚ್ಚಿ,ಎಲುಬಿನ ಹಂದರವ ಹೊಕ್ಕಿ,
ಸುಮ್ಮನೊಮ್ಮೆ ಕಿವಿಗೊಟ್ಟು ಕೇಳು..
ಓಂಕಾರ ಮಾತ್ರವಲ್ಲ ಧ್ಯಾನ…
ಕಡು ಆಳದಲ್ಲಿ ಇಡಬಲ್ಲೆ ನಾನು
ಹೆಸರೊಂದು ಗಹನ..’
ಅದ ಕೇಳಿ ನಖಶಿಖಾಂತ ನಡುಗಿ ಈ ಬಗೆಯ ಒಲವಿಗೆ ಒಂದೊಳ್ಳೆ ಹೆಸರಿಡಲು ಹೋಗಿ ಸೋತು ಹೋದೆ.
ತೃಪ್ತ ಸ್ಥಿತಿಯಲ್ಲೂ ತಪ್ಪದು ತಪ್ತತೆ.

ಕೂದಲೆಳೆಯಂಥ ಜೋಡುಂಗರ, ನನ್ನ ಹೆಸರ ಮೊದಲಕ್ಷರದ ಪದಕ,ಒಂದು ಜರತಾರಿ ಸೀರೆ ಬೇಕೆಂದವಳು ನೀನು..
ಎಂದೂ ಉಡಲಾರೆ,ಯಾರೆದಿರೂ ತೊಡಲಾರೆ ಎಂದಿದ್ದೆ.
ಮತ್ತೇಕೆ ವೃಥಾ ಎಂದಿದ್ದಕ್ಕೆ ಕೊಳದಂಥ ನಿನ್ನ ಕಂಗಳು ನದಿಯಾದವು.
ಬೆಳಕು ಲೇಪಿಸಿಕೊಂಡ ನಿನ್ನ ಕೆನ್ನೆಗೆ ಉಪ್ಪು ನೀರಿನ ಕಲೆ ಹತ್ತಿಸಿದ ಪಾಪಿ ನಾನು.
ಎರಡು ಚಿನ್ನದ ಎಳೆಗಳ ಹೊದಿಸಿದ
ಪತ್ತಲಕ್ಕೆ ಹೇಳಿರುವೆ.
ನಮ್ಮಿಬ್ಬರ ಮೊದಲಕ್ಷರ ಸೇರಿಸಿದ ಪದಕ ,
ನಿನ್ನ ಕಿರುಬೆರಳಿಗೊಂದು ಬೆಳಕಿನುಂಗುರದ ಆಸೆ ಕೇಳಿ ನಕ್ಕ ಅಕ್ಕಸಾಲಿ.
ನಾಳೆ ಪ್ರೇಮಿಗಳ ದಿನವಂತೆ.
ಮಂಡಿಯೂರುತ್ತೇನೆ ನಾನು
ಮತ್ತೊಮ್ಮೆ..
ಇವೆಲ್ಲವನ್ನೂ ನಿನಗಾಗಿ ಹಿಡಿದು..
ನಾವೀಗ ಏನು ಎನ್ನುವ ನಿನ್ನ ಪ್ರಶ್ನೆಗೆ ಉತ್ತರ ನನ್ನಲ್ಲೂ ಇಲ್ಲ ಚಿನ್ನಾ..
ಒಬ್ಬರಾ,ಇಬ್ಬರಾ..
ನಾನಾ,ನೀನಾ
ಶೂನ್ಯ ವಾ?
ಏನಾದರಾಗಲಿ.
ದ್ವೈತಾದ್ವೈತದ ಅನುಭೂತಿ ಇದು.
ಕೆಲವು ಉತ್ತರಗಳಷ್ಟೇ ಸುಂದರವಾಗಿರುತ್ತವೆ.
ಪ್ರಶ್ನೆ ಬಯಸದ ಪ್ರೀತಿ ಇದು.
ಪರಿಚಯದ ಹೊಸತರಲ್ಲಿ
ಶಬ್ದಗಳ ಗೋಜು ನಮಗೆ ಬೇಕಿಲ್ಲವೆಂದಿದ್ದೆ ನೀನು.
ಶಬ್ದ ಸ್ತಬ್ಧವಾಗುವ ಸೊಗಸು ನೀನಡಿಯಿಟ್ಟ ಮೇಲೇ ಅರಿವಾದದ್ದು ನನಗೆ.
ನೀನು ನನ್ನವಳಾದ ದಿನದಿಂದ ಕಾಲ ಕಾಲವಾಗಿದೆ ನನ್ನ ಪಾಲಿಗೆ.
ಒಣಮದ್ಯಾಹ್ನಕ್ಕೆ ಮುಂಜಾವಿನ ಜಂಭವಿದೆ.
ನಡುರಾತ್ರಿಗಳು ನೆನಪುಗಳ ಸೂತ್ರಕ್ಕೆ ಸಿಕ್ಕಿ ನಿದ್ದೆಗೆಡುವುದೂ ನನ್ನ ಪಾಲಿಗೆ ಸೊಗಸೇ..
ನನ್ನ ಹೆಣ್ಣೇ,
ಒಲವ ಹಣ್ಣೇ
ಬಯಕೆ ಕಣ್ಣೇ
ಎಲ್ಲಿ..ಮತ್ತೊಮ್ಮೆ ಕೇಳು…
‘ನಮ್ಮಿಬ್ಬರಿಗೂ ಏನಾಗಿದೆ ಹನೀ’
ನೀನು ನನ್ನ ಕೋಗಿಲೆ..
ಒಂದು ವಾಕ್ಯದ ,ಒಂದೇ ವಾಕ್ಯದ
ಆ ಹಾಡನ್ನು ಹಾಡುತ್ತಲೆ ಇರಬಾರದೆ..!!?






ಈ ಕವಿತೆಯ ಚಲನೆ ಮುಕ್ತವನ್ನು ಪ್ರತಿಪಾದಿಸುತ್ತದೆ.ಬಂಧನವಿಲ್ಲದ ಬಂಧವನ್ನು, ಪ್ರಶ್ನೆಗಳೇ ಇಲ್ಲದ ಪ್ರಶ್ನೋತ್ತರಗಳನ್ನು, ಮಧುರ ಪ್ರೇಮದ ಮೆಲಕನ್ನು ಮೆದುಧ್ವನಿಯಲ್ಲಿ ದಾಖಲಿಸುತ್ತದೆ. ಹಂಸದ ನಡಿಗೆ ಕವಿತೆಗೆ ದಕ್ಕಿದೆ…
ಒಮ್ಮೆ ರೂಮಿ, ಒಮ್ಮೆ ಅಕ್ಕ ಮಹಾದೇವಿ ಮಿಂಚಿ ಮರೆಯಾದರು….